Untitled Document
Sign Up | Login    
ಕೊರೆವ ದಾರಿಗೆ ತಡೆ ( 5 )

ಇಂದಿನದು ಹೋರಾಟದ ಕೊನೆಯ ಘಟ್ಟ. ಡಿಸೋಜನ ತಂಡ ಮೂರು ಲೋಡು ಸಾಗುವಾನಿ, ಬೀಟೆಯ ಸೈಜುಗಳನ್ನು ಸಿದ್ಧಪಡಿಸಿಟ್ಟಿತ್ತು. ರಾತ್ರಿ ಸುಮಾರು ಒಂದು ಗಂಟೆಗೆ ಮೂರು ಲಾರಿ ಬರಲಿತ್ತು. ಲಾರಿ ತುಂಬುವ ಸಮಯದಲ್ಲಿಯೇ ಪೊಲೀಸ್ ನೆರವಿನೊಂದಿಗೆ ಫಾರೆಸ್ಟ್ ಅಧಿಕಾರಿಗಳು ದಾಳಿ ಮಾಡುವಂತೆ ಯೋಜಿಸಲಾಗಿತ್ತು. ಬಳಗದ ಸದಸ್ಯರು ಸಹ ಅಲ್ಲಿ ಸೇರಲಿದ್ದರು. ಆದರೆ ಓಡುತ್ತ ಬಂದ ಚಮೇಲಿ ಈ ಸುದ್ದಿ ಹೇಗೋ ಡಿಸೋಜನಿಗೆ ಗೊತ್ತಾಗಿರುವ ಸಂಭವ ಇದೆಯೆಂದೂ, ರಾತ್ರಿ 11 ಗಂಟೆಗೇ ಲಾರಿ ಹೋಗುತ್ತದೆಂದೂ ತಿಳಿಸಿ ಹೋಗಿದ್ದಳು. ತಕ್ಷಣ ಕೃಪಾ, ಜಯರಾಮ, ಹೇಮಂತರು ಕಾರ್ಯಪ್ರವೃತ್ತರಾದರು. ಪೊಲೀಸರಿಗೆ ಸೂಚನೆ ಕಳುಹಿಸಲಾಯಿತು.
ಅವರು ಬರುವವರೆಗೆ ಕಾಯುತ್ತ ಕುಳಿತುಕೊಳ್ಳುವುದರಿಂದ ಹಕ್ಕಿ ಹಾರಿ ಹೋಗುತ್ತಿತ್ತು. ಊರಿಗೆ ಊರೇ ಎದ್ದಂತೆ, ದೊಣ್ಣೆ, ಗುದ್ದಲಿ, ಕತ್ತಿ ಹಿಡಿದ ಜನತೆ ಕೃಪಾ, ಜಯರಾಮ, ಹೇಮಂತರನ್ನು ಹಿಂಬಾಲಿಸಿತು. ಒಳಾರಣ್ಯದ ಮೊದಲಲ್ಲಿ ಚಮೇಲಿ ಕೂಡಿಕೊಂಡು ದಾರಿ ತೋರಿಸುತ್ತ ಮುನ್ನಡೆದಳು.
ಇನ್ನೇನು ಲಾರಿ ಹೊರಡಬೇಕು ಅನ್ನುವಷ್ಟರಲ್ಲಿ ಬಳಗ ಅಲ್ಲಿ ತಲುಪಿತ್ತು. ಆದರೆ ಅದೇ ಸಮಯದಲ್ಲಿ ಅಲ್ಲಿ ಒಂದು ದುರ್ಘಟನೆ ನಡೆದು ಹೋಯಿತು. ಡಿಸೋಜನ ಗ್ಯಾಂಗಿನವರು ಯಾರೋ ಗುರಿಯಿಟ್ಟು ಬೀಸಿದ ಮಚ್ಚು ಚಮೇಲಿಯ ಕೊರಳನ್ನು ಕಚ್ಚಿತು. ಚಮೇಲಿ ಕೆಳಗುರುಳಿದ್ದಳು. ಅವಳ ದೇಹದಿಂದ ಚಲ್ಲೆಂದು ಚಿಮ್ಮಿದ ರಕ್ತ ಮಡುವಾಯಿತು. ಚಮೇಲಿ ಇನ್ನಿಲ್ಲವಾಗಿದ್ದಳು.
ತಕ್ಷಣ ಹೇಮಂತ, ಜಯರಾಮ ವೈರಿಗಳತ್ತ ಡೈನಮೆಟ್ ಸಿಡಿಸಿದರು. ಭಯಂಕರ ಸದ್ದಿನೊಂದಿಗೆ ಡೈನಮೆಟ್ ಸ್ಫೋಟಗೊಂಡಾಗ ಅವರು ಕಂಗಾಲಾದರು. ಸಿಕ್ಕತ್ತ ಓಡತೊಡಗಿದರು. ದೊಡ್ಡ ಹಿಡಿದ ಜನ ಅವರನ್ನು ತದಕಿ ಕಟ್ಟಿ ಹಾಕಿದರು. ಡಿಸೋಜನೂ ಸಿಕ್ಕಿಹಾಕಿಕೊಂಡ. ಅಷ್ಟರಲ್ಲಿ ಪೊಲೀಸರು ಬಂದರು. "ಪರಿಸರ ಕಾಳಜಿಗೆ ಜಯವಾಗಲಿ'' ಎಂಬ ಘೋಷಣೆಯೊಂದಿಗೆ ಡಿಸೋಜನನ್ನು, ಅವನ ತಂಡವನ್ನು ಹೊತ್ತ ಪೊಲೀಸ್ ವ್ಯಾನು ಯಲ್ಲಾಪುರದ ದಾರಿ ಹಿಡಿಯಿತು.

***
ಹೇಮಂತ ಈಗ ತನ್ನ ಊರಿಗೆ ಹೊರಟು ನಿಂತಿದ್ದ. ಅವನು ಬಂದ ಕೆಲಸ ಪೂರ್ಣಗೊಂಡಿತ್ತು. ಕಾಡುಗಳ್ಳರಿಗೆ ಶಿಕ್ಷೆಯಾಗಿತ್ತು. ಮಲವಳ್ಳಿಯ ಘಟನೆಯಿಂದಾಗಿ ಇಡೀ ಯಲ್ಲಾಪುರವೇ ಪರಿಸರ ರಕ್ಷಣೆಗೆ ಕಟ್ಟಿಬದ್ಧವಾಯಿತು. ಈ ರಾಷ್ಟ್ರಕಾರ್ಯಕ್ಕಾಗಿ ಬಲಿದಾನ ಆದ ಚಮೇಲಿಯ ಸ್ಮಾರಕವೊಂದನ್ನು ಊರಿನಲ್ಲಿ ನಿರ್ಮಾಣ ಮಾಡಲಾಯಿತು. ಬಳಗದ ಹೋರಾಟ ಯಶಸ್ಸು ಕಂಡಿತು. ಇನ್ನು ಮುಂದೆ ಬಳಗ ರಾಜ್ಯ ಪರಿಸರ ಸಂರಕ್ಷಣಾ ಸಮಿತಿಯ ಅಂಗ ಸಂಸ್ಥೆಯಾಗಿ ಕೆಲಸ ಮಾಡುತ್ತದೆ ಎಂದು ಘೋಷಿಸಿದ ಹೇಮಂತ.

ಹಿಂದಿನ ದಿನ ತನಗಾಗಿ ಏರ್ಪಡಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡುತ್ತ ಹೇಮಂತ ಭಾವುಕನಾಗಿ ನುಡಿದಿದ್ದ. "ಅಭಿವೃದ್ಧಿ ಹೆಸರಿನಲ್ಲಿ ಹೆದ್ದಾರಿ ನಿರ್ಮಿಸುವ ನೆವದಲ್ಲಿ ಭ್ರಷ್ಟಾಚಾರ ಎಲ್ಲೆಲ್ಲೂ ದಾರಿ ಮಾಡಿಕೊಂಡಿದೆ. ಇಡೀ ಜಗತ್ತೇ ಭ್ರಷ್ಟಾಚಾರದ ದಾರಿಯಾಗಿ ಮಾರ್ಪಟ್ಟಿದೆ. ಮನುಷ್ಯ ಪರಿಸರ ನಾಶದಂಥ ಆತ್ಮವಿನಾಶದ ದಾರಿಯನ್ನು ಕೊರೆದುಕೊಳ್ಳುತ್ತಿದ್ದಾನೆ. ನಿಜವಾದ ದಾರಿ ನಿಜವಾದ ಅಭಿವೃದ್ಧಿಗೆ ಇರಲಿ. ದಾರಿಯ ಹಾಗೆ ಕಾಣುವುದೆಲ್ಲ ದಾರಿಯಲ್ಲ. ಭ್ರಮಾಲೋಕವನ್ನು ಸೃಷ್ಟಿಸುವವರು ಸೃಷ್ಟಿಸುತ್ತಲೇ ಇರುತ್ತಾರೆ. ಇದನ್ನು ಅರಿತು ಜಾಗೃತರಾಗದೇ ಹೋದರೆ ಮುಂದಿನ ಪೀಳಿಗೆ ನಮ್ಮನ್ನೆಂದೂ ಕ್ಷಮಿಸದು''.

ಊರಿಗೇ ಊರೇ ಅವನನ್ನು ಬೀಳ್ಕೊಡಲು ಬಸ್ಸಿನ ಬಳಿ ಬಂದಿದೆ. ಜನರ ಆತ್ಮೀಯತೆ, ಗೌರವಾದರ ಅವನನ್ನು ಮೂಕವಾಗಿಸಿದೆ. ಉದ್ದೇಶ ಸಫಲವಾದ ಧನ್ಯತೆ ಅವನದು. ಬಸ್ಸೇರುವಾಗ ಪರಿಸರ ಸಂರಕ್ಷಣಾ ಯಜ್ಞದಲ್ಲಿ ಆಹುತಿಯಾದ ಕಪ್ಪು ಕಣ್ಣಿನ ಚೆಲುವೆ ಚಮೇಲಿಯನ್ನು ನೆನೆದು ಫಳಕ್ಕನೇ ಅವನ ಕಣ್ಣುಗಳಿಂದ ನೀರು ಚಿಮ್ಮಿತು. ಜಯರಾಮ ಆಲಂಗಿಸಿ ಮಿತ್ರನನ್ನು ಬೀಳ್ಕೊಂಡ.

ಹೇಮಂತ ಬಸ್ಸೇರಿ ತನ್ನ ಸೀಟಿನಲ್ಲಿ ಹೋಗಿ ಕುಳಿತುಕೊಂಡ. ಅವನ ಕಣ್ಣು ಕೃಪಾಳಿಗಾಗಿ ಹುಡುಕಾಡಿತು. ದೂರದಲ್ಲಿ ಮರವೊಂದರ ಕೆಳಗೆ ಕುಳಿತು ಬಿಕ್ಕಿ ಬಿಕ್ಕಿ ಅಳುತ್ತಿದ್ದ ಕೃಪಾ ಅವನ ಕಣ್ಣಿಗೆ ಬೀಳಲಿಲ್ಲ. ಬಸ್ಸು ಚಲಿಸಿತು.
----

Name : ವನರಾಗ ಶರ್ಮಾ ವನರಾಗ ಶರ್ಮಾ
Mobile no : -
Write Comments
*Name :
*Comment :
(Max.1000 Characters)
  
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited